ಬ್ರಿಸ್ಬೇನ್, ತಾಮಸ್ ಮ್ಯಾಕ್‍ಡೌಗಲ್
	 1773-1860. ಸ್ಕಾಟ್‍ಲೆಂಡಿನ ಖ್ಯಾತ ದಂಡಾಳು ಮತ್ತು ಖಗೋಳಜ್ಞ. ಪ್ರಾರಂಭಿಕ ಶಿಕ್ಷಣಾನಂತರ ಹದಿನಾರನೆಯ ವಯಸ್ಸಿನಲ್ಲಿ ಸೈನ್ಯ ಸೇರಿದ. ಒಮ್ಮೆ ವೆಸ್ಟ್ ಇಂಡೀಸಿಗೆ ಸಮುದ್ರಯಾನ ಮಾಡುತ್ತಿದ್ದಾಗ ನೌಕಾಯಾನ ದೋಷದಿಂದ (ನ್ಯಾವಿಗೇಶನಲ್ ಎರರ್) ಸಂಭವಿಸಬಹುದಾಗಿದ್ದ ಹಡಗು ದುರಂತದ ಬಗ್ಗೆ ತೀವ್ರ ಯೋಚನೆಗೀಡಾದ. ಇದು ಅವನಿಗೆ ಖಗೋಳದ ಬಗೆಗಿನ ಅಧ್ಯಯನ ಮಾಡಲು ಪ್ರೇರಣೆನೀಡಿತು.

	ನಾಲ್ಕು ವರ್ಷಗಳ ಕಾಲ (1821-25) ಬ್ರಿಸ್ಬೇನ್ ನ್ಯೂ ಸೌತ್‍ವೇಲ್ಸಿನ ಗವರ್ನರನಾದ. ಅಲ್ಲಿ ಅವನು ದ್ರಾಕ್ಷಿ, ಕಬ್ಬು ಮತ್ತು ಹೊಗೆಸೊಪ್ಪಿನ ಬೆಳೆ ಪ್ರಾರಂಭಿಸಿದ. 1822ರಲ್ಲಿ ಪರಮಟ್ಟ ಎಂಬಲ್ಲಿ ಒಂದು ವೀಕ್ಷಣಾಲಯ ಸ್ಥಾಪಿಸಿದ. 7385 ನಕ್ಷತ್ರಗಳನ್ನು ಗುರುತಿಸಿ ಪಟ್ಟಿ ಮಾಡಿದ. ಇದೇ ಬ್ರಿಸ್ಬೇನ್ ಪಟ್ಟಿ (ಬ್ರಿಸ್ಬೇನ್ ಕ್ಯಾಟಲಾಗ್). ಆಸ್ಟ್ರೇಲಿಯದಿಂದ ಮರಳಿದವನು ಖಗೋಲವೀಕ್ಷಣೆ ಮತ್ತು ಕಾಂತೀಯ ಮಾಪನಗಳಿಗಾಗಿ ಒಂದು ಸಂಯುಕ್ತ ಠಾಣ್ಯವನ್ನು ರಾಕ್ಸ್‍ಬರ್ಗ್‍ಷಿರ್‍ನ ಮೇಕರ್‍ಸ್ಟೌನಿನಲ್ಲಿ ಸ್ಥಾಪಿಸಿದ (1826). 1847ರ ತನಕವೂ ಖಗೋಳ ಅಧ್ಯಯನದಲ್ಲಿ ನಿರತನಾಗಿದ್ದ. ಮೇಕರ್‍ಸ್ಟೌನಿನಲ್ಲಿ ಬ್ರಿಸ್ಬೇನ್ 1841ರಿಂದ ಕಾಂತೀಯ ವೀಕ್ಷಣೆಗಳಲ್ಲಿ ಲೀನನಾದ. ಇವು ಎಡಿನ್‍ಬರೋ ರಾಯಲ್ ಸೊಸೈಟಿಯ 3 ಸಂಪುಟಗಳ ಟಿಪ್ಪಣಿಗಳಲ್ಲಿ ಸೇರಿವೆ. ರಾಯಲ್ ಸೊಸೈಟಿಯ ಕೋಷಿ ಪದಕ, ಎಡಿನ್‍ಬರೋ ರಾಯಲ್ ಸೊಸೈಟಿಯ ಅಧ್ಯಕ್ಷತೆ, ಬ್ಯಾರೊನೆಟ್ ಮತ್ತು ಜನರಲ್ ಹೀಗೆ ಬ್ರಿಸ್ಬೇನನಿಗೆ ಸಂದ ಗೌರವಗಳು ಹಲವು. ಆಸ್ಟ್ರೇಲಿಯದ ಮೂರನೆಯ ದೊಡ್ಡ ನಗರ ಇವನ ಹೆಸರಿನಿಂದಲೇ ಕರೆಯಲ್ಪಡುತ್ತಿದೆ.				(ಎ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ